ಜೇಮ್ಸಿಯ

	ಸ್ಯಾಕ್ಸಿಫ್ರಾಗೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ. ಎಡ್ವೀನಿಯ ಪರ್ಯಾಯನಾಮ. ಉತ್ತರ ಅಮೆರಿಕದ ಪಶ್ಚಿಮಭಾಗಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.

	ಇದು ಕುರುಚಲು ಅಥವಾ ಚಿಕ್ಕ ಪೊದೆಯಂಥ ಪರ್ಣಪಾತಿ ಸಸ್ಯ. ಇದರ ಎತ್ತರ 1.5-2 m. ಎಲೆಗಳು ಸರಳ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳು ಬಿಳಿಬಣ್ಣದವು ; ರೆಂಬೆಗಳ ತುದಿಯಲ್ಲಿ ಸಂಕೀರ್ಣ ಬಗೆಯ ಹೂಗೊಂಚಲುಗಳಲ್ಲಿ ಅರಳುತ್ತವೆ. ಪುಪ್ಪಪತ್ರಗಳು, ದಳಗಳು ತಲಾ 5. ಕೇಸರಗಳು 10. ಫಲ ಸಂಪುಟ ರೀತಿಯದು.

	ಜೇಮ್ಸಿಯವನ್ನು ಬೀಜ ಇಲ್ಲವೆ ಚೆನ್ನಾಗಿ ಬಲಿತ ಕಾಂಡ ತುಂಡುಗಳಿಂದ ಬೆಳೆಸಬಹುದು. ಚೆನ್ನಾಗಿ ಬಿಸಿಲಿರುವಂಥ ಬಯಲು ಪ್ರದೇಶಗಳಲ್ಲೂ ನೀರು ಬಸಿದುಹೋಗುವಂಥ ಗೋಡು; ಮಣ್ಣಿನಲ್ಲೂ ಇದರ ಬೆಳೆವಣಿಗೆ ಬಲು ಹುಲುಸು.
(ಎಸ್.ಐ.ಎಚ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ